ಸಚ್ಚಿದಾನಂದ ಹೀರಾನಂದ ವಾತ್ಸ್ಯಾಯನ
	1911-87. ಹಿಂದಿ ಕವಿ ಹಾಗೂ ಕಥೆಗಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕಾವ್ಯನಾಮ ಆಜ್ಞೇಯ. ಇವರು ಪಂಜಾಬಿನ ದೇವರಿಯ ಜಿಲ್ಲೆಯ ಕಸಿಯ ಎಂಬಲ್ಲಿ 1911 ಮಾರ್ಚ್ 7ರಂದು ಜನಿಸಿದರು. ತಂದೆ ಹೀರಾನಂದ ಶಾಸ್ತ್ರೀ ಪುರಾತತ್ತ್ವ ವಿಭಾಗದಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಆಜ್ಞೇಯರ ಬಾಲ್ಯ ಲಖನೌ, ಬಿಹಾರ, ಮದರಾಸ್ ಮುಂತಾದ ಕಡೆಗಳಲ್ಲಿ ಕಳೆಯಿತು. ಶಿಕ್ಷಣವನ್ನು ಮದರಾಸ್ ಮತ್ತು ಲಾಹೋರ್‍ಗಳಲ್ಲಿ ಪಡೆದರು. ಲಾಹೋರನಲ್ಲಿ ಬಿ.ಎಸ್ಸಿ. ಪದವಿ ಪಡೆದರು. ಅನಂತರ ಇಂಗ್ಲಿಷ್ ಎಂ.ಎ ಸೇರಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ದುಮುಕಿದರು. ಆಜಾದ್ ಸುಖದೇವ್ ಮತ್ತು ಭಗವತೀ ಚರಣ ಪೋಹರಾ ಅವರ ಪರಿಚಯವಾಯಿತು. ದೆಹಲಿಯ ಸಾಬೂನು ಕಾರ್ಖಾನೆಯಲ್ಲಿದ್ದುಕೊಂಡು ಕ್ರಾಂತಿಕಾರಿ ಗೆಳೆಯರೊಂದಿಗೆ ಬಾಂಬ್ ತಯಾರಿಸಿದ್ದರಿಂದ ಇವರು ನಾಲ್ಕು ವರ್ಷ ಸೆರೆಮನೆಯಲ್ಲಿ ಕಳೆದರು. 1943ರಲ್ಲಿ ಸೈನ್ಯಕ್ಕೆ ಸೇರಿದರು. ಅಸ್ಸಾಂ, ಬರ್ಮ, ಫ್ರೆಂಟನಲ್ಲಿದ್ದು ಕೊಹಿಮಾ ಫ್ರೆಂಟಿನಲ್ಲಿ ಸೇವೆಸಲ್ಲಿಸಿದರು. ಅನಂತರ ಅದನ್ನು ಬಿಟ್ಟು ಸೈನಿಕ್, ವಿಶಾಲ ಪ್ರಪಂಚ ಭಾರತ್, ಪ್ರತೀಕ್ ಮತ್ತು ದಿನಮಾನ್ ಮುಂತಾದ ಪತ್ರಿಕೆಗಳನ್ನು ಸಂಪಾದಿಸಿದರು. ಇವರು ಅನೇಕ ಬಾರಿ ವಿಶ್ವಪರ್ಯಟನೆ ಮಾಡಿದ್ದಾರೆ. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಸ್ಕøತಿ ಮತ್ತು ಸಾಹಿತ್ಯದ ಪ್ರಾಧ್ಯಾಪಕರಾಗಿದ್ದರು (1961-64).

	ಇವರು ಕವಿಯಾಗಿ ಮತ್ತು ಕಥೆಗಾರರಾಗಿ ಖ್ಯಾತರಾಗಿದ್ದಾರೆ. ಪ್ರವಾಸ ಸಾಹಿತ್ಯ, ಲಲಿತ ಪ್ರಬಂಧ ಮತ್ತು ವಿಮರ್ಶೆಯ ಕ್ಷೇತ್ರದಲ್ಲಿಯೂ ಇವರ ಕೊಡುಗೆ ಉಲ್ಲೇಖನೀಯವಾದುದು. ಇವರ ಕೃತಿಗಳಲ್ಲಿ ಶೇಖರ್: ಏಕ್ ಜೀವನೀ ಮಹತ್ತ್ವಪೂರ್ಣವಾದದ್ದು. 1944ರಲ್ಲಿ ಇದು ಎರಡು ಭಾಗಗಳಲ್ಲಿ ಪ್ರಕಟಗೊಂಡಿತು. ಇವರ ಮತ್ತೊಂದು ಕಾದಂಬರಿ ನದಿ ಕೇ ದ್ವೀಪ್ 1951ರಲ್ಲಿ ಪ್ರಕಟವಾಯಿತು. ಈ ಎರಡು ಕೃತಿಗಳಲ್ಲದೆ ಅಪನೇ ಅಪನೇ ಅಜನಬೀ ಎಂಬ ಗ್ರಂಥ ಇವರ ಕ್ರಾಂತಿಕಾರಿ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಶೇಖರ್: ಏಕ್ ಜೀವನೀ ಯಲ್ಲಿ ಕ್ರಾಂತಿಕಾರೀ ವ್ಯಕ್ತಿಯ ಚಿತ್ರಣ, ನದಿ ಕೇ ದ್ವೀಪ್ ದಲ್ಲಿ ಪ್ರೇಮ ಮತ್ತು ವಿವಾಹದ ಸಮಸ್ಯೆ ಇದೆ. ಅಪನೇ ಅಪನೇ ಅಜನಬೀ ಯಲ್ಲಿ ಮೃತ್ಯುವಿನ ಸಾಕ್ಷಾತ್ ಅನುಭವ ಚಿತ್ರಿತವಾಗಿದೆ.

	ಇವರು ಮೊದಮೊದಲು ಛಾಯಾವಾದಿ ಕವಿಯಾಗಿ ಬರೆಯುತ್ತಿದ್ದ ವರು, ಹೊಸ ಹಾದಿ ಹಿಡಿದು ಪ್ರಯೋಗವಾದದ ಪ್ರವರ್ತಕರಾದರು. 1943ರಲ್ಲಿ ತಾರ-ಸಪ್ತಕ್ ಪ್ರಕಟವಾಗಿ ಹಿಂದಿ ಕಾವ್ಯದ ಆಯಾಮವನ್ನು ವಿಸ್ತರಿಸಿತು. ಈ ಸಂಕಲನದ ಮುನ್ನುಡಿ ಪ್ರಯೋಗವಾದಕ್ಕೆ ನಾಂದಿಯಾ ಯಿತು. ಹರೀ ಘಾಸ್ ಪರ್ ಕ್ಷಣ ಭರ್ (1949) ಇವರ ಮೊದಲ ಪ್ರಯೋಗವಾದಿ ಕೃತಿ.

	ಭಗ್ನದೂತ್ (1933), ಚಿಂತಾ (1943), ಇತ್ಯಲಮ್ (1949), ಹರೀ ಘಾಸ್ ಪರ್ ಕ್ಷಣ ಭರ್ (1949), ಬಾವರಾ ಅಹೇರೀ (1954), ಅರೀ ಓ ಕರುಣಾ ಪ್ರಭಾಮಯ್ (1959), ಆಂಗನ್ ಕೇ ಪಾರ್ ದ್ವಾರ್ (1961), ಪೂರ್ವಾ (1965), ಕ್ಯೋಂಕಿ ಮೈ ಉಸೇ ಜಾನತಾ ಹೂಂ (1969), ಸಾಗರ್ ಮುದ್ರಾ (1971), ಮಹಾವೃಕ್ಷ ಕೇ ನೀಚೇ (1972), ಪಹಲೇ ಮೈ ಸನ್ನಾಟಾ ಬುನೆತಾ ಹೂಂ (1976), ಕಿತ್ನೀ ನಾವೋ ಮೇ ಕಿತ್ನೀ ಬಾರ್ (1962)-ಇವು ಇವರ ಕವನ ಸಂಕಲನಗಳು.

	ಪಿಪಥಗಾ (1937), ಪರಂಪರಾ (1944), ಕೋಠರೀ ಕೀ ಬಾತ್ (1945), ಶರಣಾರ್ಥಿ (1948), ಜಯದೋಲ್ (1951)-ಇವು ಇವರ ಕಥಾಸಂಕಲನಗಳು.

	ಆಂಗನ್ ಕೇ ಪಾರ್ ದ್ವಾರ್ ಎಂಬ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ (1964). ಕಿತ್ನೀ ನಾವೋ ಮೇ ಕಿತ್ನೀ ಬಾರ್ ಎಂಬ ಕವನ ಸಂಕಲನಕ್ಕೆ 1978ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭ್ಯವಾಯಿತು. 1968ರಲ್ಲಿ ಹಿಂದಿ ಸಾಹಿತ್ಯ ಸಮ್ಮೇಳನ ಇವರಿಗೆ ಸಾಹಿತ್ಯ ವಾಚಸ್ಪತಿ ಎಂಬ ಬಿರುದನ್ನೂ 1971ರಲ್ಲಿ ವಿಕ್ರಮ್ ವಿಶ್ವವಿದ್ಯಾಲಯ ಡಿಲಿಟ್ ಪದವಿಯನ್ನೂ ನೀಡಿ ಗೌರವಿಸಿದೆ. ಇವರು 1987ರಲ್ಲಿ ನಿಧನರಾದರು.				

			(ವಿ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ